ಕಾಕ್ಸಿಡಿ

ಸಸ್ಯತಿಗಣೆಗಳ (ಪ್ಲಾಂಟ್ ಬಗ್ಸ್) ಒಂದು ಕುಟುಂಬ. ಕೀಟವರ್ಗದ ಹೆಮಿಪ್ಟಿರ ಗಣದ ಹೋಮಾಪ್ಟಿರ ಉಪಗಣಕ್ಕೆ ಸೇರಿದೆ. ಹುರುಪೆ ಕೀಟಗಳು (ಸ್ಕೇಲ್ ಇನ್ಸೆಕ್ಟ್) ಮತ್ತು ಮೇಣ ತಿಗಣೆಗಳು (ಮೀಲೀ ಬಗ್ಸ್) ಇದಕ್ಕೆ ಸೇರಿದ ವಿಶೇಷ ಬಗೆಯ ಕೀಟಗಳು. ಇವು ಗಾತ್ರದಲ್ಲಿ ಸಣ್ಣವು ರಚನೆಯಲ್ಲಿ ಬೇರೆ ಹೋಮಾಪ್ಟಿರ ಕೀಟಗಳ ಲಕ್ಷಣಗಳನ್ನು ತೋರಿಸಲಾರದಷ್ಟು ವಿಶಿಷ್ಟವಾಗಿ ಮಾರ್ಪಟ್ಟಿವೆ. ಹೆಣ್ಣುಗಳಿಗೆ ರೆಕ್ಕೆಗಳು ಮತ್ತು ಕಾಲುಗಳು ಇಲ್ಲದಿರುವುದರಿಂದ ಇವು ಸಾಧಾರಣವಾಗಿ ಒಂದೇ ಕಡೆ ಅಂಟಿಕೊಂಡು ಚಲಿಸದೆ ಇರುತ್ತವೆ. ಆದರೆ ಗಂಡು ಕೀಟಕ್ಕೆ ಒಂದು ಜೊತೆ ರೆಕ್ಕೆಗಳಿವೆ. ವಿರಳವಾಗಿ ಇವಕ್ಕೂ ರೆಕ್ಕೆಗಳಿಲ್ಲದಿರುವುದುಂಟು. ಈ ಕುಟುಂಬದ ಕೀಟಗಳಿಗೆ ಆಹಾರವನ್ನು ಹೀರುವ ವದನಾಂಗಗಳಿಲ್ಲ. ಆದರೆ ಉದರದ ತುದಿಯಲ್ಲಿ ಸೂಜಿಯಂಥ ಸ್ಟೈಲೆಟ್ ಎಂಬ ವಿಶೇಷ ರಚನೆಯೊಂದಿದೆ. ಇದರ ಮೂಲಕ ಆಹಾರವನ್ನು ಹೀರುತ್ತವೆ.

 ಹೆಣ್ಣಿನ ಕುಡಿಮೀಸೆ ಖಂಡರಹಿತವಾಗಿರಬಹುದು ಇಲ್ಲವೆ 11 ಖಂಡಗಳಿಂದ ಕೂಡಿರಬಹುದು. ಆದರೆ ಗಂಡಿನ ಕುಡಿಮೀಸೆಯಲ್ಲಿ 10 ರಿಂದ 25 ಖಂಡಗಳಿವೆ. ಗಂಡು ಕೀಟ ಹೆಚ್ಚುಕಡಿಮೆ ನ್ಯಾಟ್ ಸೊಳ್ಳೆಯ ರೀತಿ ಕಾಣುತ್ತದೆ. ಆದರೆ ಇದರಲ್ಲಿ ವದನಾಂಗಗಳು ಇಲ್ಲದೆ ಇರುವುದರಿಂದ ಮತ್ತು ಸ್ಟೈಲೆಟ್ ಇರುವುದರಿಂದ ಇದನ್ನು ನ್ಯಾಟ್‍ಸೊಳ್ಳೆಯಿಂದ ಬೇರೆ ಎಂದು ಗುರುತಿಸಬಹುದು.

 ಹುರುಪೆ ಕೀಟಗಳ ಬೆಳೆವಣಿಗೆ ವಿವಿಧ ಪ್ರಭೇದಗಳಲ್ಲಿ ಭಿನ್ನವಾಗಿದೆ. ಕೆಲವಲ್ಲಂತೂ ಬೆಳೆವಣಿಗೆ ಬಹಳ ಸಂಕೀರ್ಣ. ಪ್ರಥಮ ಪೊರೆಬಿಟ್ಟ ಮರಿಯಲ್ಲಿ ಕಾಲುಗಳೂ ಕುಡಿಮೀಸೆಗಳೂ ಇರುತ್ತವೆ. ಇವು ಸಾಮಾನ್ಯವಾಗಿ ಬಲು ಚಟುವಟಿಕೆಯವು. ಚೆನ್ನಾಗಿ ಹರಿದಾಡುವುದರಿಂದ ಇವನ್ನು 'ತೆವಳುಕೀಟ' (ಕ್ರಾಲರ್ಸ್) ಎಂದು ಕರೆಯುತ್ತಾರೆ. ಮೊದಲನೆಯ ಬಾರಿ ಪೊರೆಬಿಟ್ಟಮೇಲೆ ಕಾಲುಗಳು ಮತ್ತು ಕುಡಿಮೀಸೆಗಳು ಕ್ಷೀಣಿಸಿ ಮರಿಗಳು ಚಲಿಸದೆ ಒಂದೇ ಕಡೆ ಇರುತ್ತವೆ. ಇವು ತಮ್ಮ ದೇಹದ ಮೇಲೆ ಮೇಣದಂಥ ಅಥವಾ ಹುರುಪೆಯಂಥ ಕವಚವನ್ನು ರೂಪಿಸಿಕೊಳ್ಳುತ್ತವೆ. ಒರಟುದೇಹದ ಕೀಟಗಳಲ್ಲಿ ಈ ಕವಚ ದೇಹದಿಂದ ಬೇರೆಯಾಗಿರುತ್ತದೆ. ಇಂಥ ತಿಗಣೆಗಳ ಹೆಣ್ಣು ತನ್ನ ಪ್ರೌಢಾವಸ್ಥೆಯಲ್ಲಿ ಈ ಹುರುಪೆಯ ಕವಚದಲ್ಲಿದ್ದು ಅದರಲ್ಲಿ ಮೊಟ್ಟೆಗಳನ್ನು ಅಥವಾ ಮರಿಗಳನ್ನು ಹಾಕುತ್ತದೆ. ಗಂಡು ತಿಗಣೆಗಳು ತಮ್ಮ ಬೆಳೆವಣಿಗೆಯಲ್ಲಿ ಹೆಣ್ಣುಗಳನ್ನು ಹೋಲುತ್ತವಾದರೂ ಪ್ರೌಢಾವಸ್ಥೆಯ ಪ್ರಥಮ ಹಂತದಲ್ಲಿ ಇವು ನಿಶ್ಚಲವಾಗಿರುತ್ತವೆ. ಈ ಅವಸ್ಥೆಯನ್ನು ಕೆಲವು ವೇಳೆ ಕೋಶಾವಸ್ಥೆ ಎಂದು ಕರೆಯುವುದುಂಟು. ಈ ಅವಸ್ಥೆಯಲ್ಲಿ ಹೊರರೆಕ್ಕೆಗಳು ಬೆಳೆಯುತ್ತವೆ.

 ಈ ಕುಟುಂಬದಲ್ಲಿ 9 ಉಪಕುಟುಂಬಗಳಿವೆ. 1 ಮಾರ್ಗರೊಡಿನೀ (ಮಾನೊಫ್ಲೆಬಿನೀ): ದೈತ್ಯ ಕಾಕ್ಸಿಡುಗಳು ಮತ್ತು ನೆಲ ಮುತ್ತುಗಳು (ಗ್ರೌಂಡ್ ಪಲ್ರ್ಸ್). ಹೆಣ್ಣುತಿಗಣೆಗಳು ಬಹು ದೊಡ್ಡವು. ಗುಂಡಗಿವೆ. ದೇಹ ಖಂಡಗಳಿಂದ ಕೂಡಿದೆ. ಕಾಲುಗಳು ದೃಢವಾಗಿರಬಹುದು ಅಥವಾ ಕ್ಷೀಣಿಸಿರಬಹುದು. ಈ ಗುಂಪಿನ ಪ್ರಭೇದಗಳ ಸಂಖ್ಯೆ ಹೆಚ್ಚಿಲ್ಲದಿದ್ದರೂ ಇವು ವಿಶ್ವವ್ಯಾಪಿಗಳು. ಬಹಳ ದೊಡ್ಡ ಗಾತ್ರದ ಕೀಟಗಳಿವು. ಲ್ಯಾವಿಯ ಮತ್ತು ಕ್ಯಾಲಿಪಾಪಸ್ ಜಾತಿಯ ಕೀಟಗಳು ಒಂದು ಅಂಗುಲದವರೆಗೂ ಬೆಳೆಯುತ್ತವೆ. ಮೆಕ್ಸಿಕೊ ದೇಶದ ಲ್ಯಾವಿಯ ಆಕ್ಸಿನ್ ಎಂಬ ಕೀಟಗಳನ್ನು ಬಣ್ಣ ತಯಾರಿಸಲು ಉಪಯೋಗಿಸುವುದುಂಟು. ಉಷ್ಣವಲಯದ ಕೆಲವು ಸಸ್ಯಗಳ ಬೇರುಗಳಲ್ಲಿ ವಾಸವಾಗಿರುವ ನೆಲ ಮುತ್ತುಗಳು ಕಂದು ಅಥವಾ ಹೊಂಬಣ್ಣದವಾದ್ದರಿಂದ ಅವುಗಳಿಂದ ಆಕರ್ಷಕ ಮಣಿಗಳನ್ನು ಮಾಡುವರು. ಈ ನೆಲ ಮುತ್ತುಗಳು ಮಾರ್ಗರೋಡಸ್ ಎಂಬ ಹೆಣ್ಣುಕೀಟಗಳ ಮೇಣದ ಕೋಶಗಳು. ಹತ್ತಿಯಂತೆ ಮೃದುವಾಗಿರುವ ಹುರುಪೆ ಕೀಟವಾದ ಐಸೀರಿಯ ಪರ್ಚೇಸಿ ಎಂಬುದು ನಿಂಬೆ ಜಾತಿಯ ಗಿಡಗಳ ಒಂದು ಮುಖ್ಯವಾದ ಪಿಡುಗು.

 2 ಆರ್ತೆಸಿನೀ: ಈ ಉಪಕುಟುಂಬದ ಕೀಟಗಳಿಗೆ ಎನ್‍ಸೆನ್ ಕಾಕ್ಸಿಡುಗಳೆಂದು ಹೆಸರು. ಇವು ಸಸ್ಯಗಳ ಬೇರುಗಳಲ್ಲಿ ವಾಸಿಸುತ್ತವೆ. ಇವುಗಳ ದೇಹದ ಖಂಡಗಳು ಸ್ಪಷ್ಟವಾಗಿವೆ. ದೇಹ ಅಂಡಾಕಾರದ್ದು. ಕುಡಿಮೀಸೆಗಳು 4 ರಿಂದ 9; ಖಂಡಗಳನ್ನೊಳಗೊಂಡಿವೆ. ದೇಹ ಗಟ್ಟಿಯಾಗಿ, ಬಿಳಿಯ ಮೇಣದ ಫಲಕಗಳಿಂದ ಆವೃತವಾಗಿದೆ. ಕೆಲವು ಬಗೆಗಳಲ್ಲಿ ಮೇಣದ ಮೊಟ್ಟೆಯ ಚೀಲ ದೇಹದ ಹಿಂತುದಿಯಲ್ಲಿದೆ. ಆರ್ತೆಜೀಯ ಇನ್ಸಿಗ್ನಿಸ್ ಎಂಬ ಕೀಟ ಹಸಿರುಮನೆ (ಗ್ರೀನ್‍ಹೌಸ್) ಸಸ್ಯಗಳ ಪಿಡುಗು. ಇದು ಉಷ್ಣವಲಯಗಳಲ್ಲಿ ಸಾಮಾನ್ಯ.

 3 ಲ್ಯಾಸಿಫೆರಿನೀ (ಟಕಾರ್ಡಿನೀ): ಈ ಗುಂಪಿಗೆ ಅರಗು ಕೀಟಗಳು ಸೇರಿವೆ. ಹೆಣ್ಣುಕೀಟಗಳು ದುಂಡಗಿವೆ. ಇವಕ್ಕೆ ಪಾದಗಳಿಲ್ಲ. ಕುಡಿಮೀಸೆಗಳಲ್ಲಿ 3 ಅಥವಾ 4 ಖಂಡಗಳು ಇವೆ. ಈ ತಿಗಣೆಗಳು ತಾವು ಸ್ರವಿಸಿದ ಅಂಟಿನೊಳಗೆ ವಾಸಿಸುತ್ತವೆ. ಅನೇಕ ಬಗೆಗಳು ಉಷ್ಣವಲಯ ಅಥವಾ ಸಮಶೀತೋಷ್ಣವಲಯ ವಾಸಿಗಳು. ಭಾರತದ ಲ್ಯಾಸಿಫರ್ ಲಕ್ಕ ಪ್ರಭೇದ ವಾಣಿಜ್ಯದೃಷ್ಟಿಯಿಂದ ಬಹಳ ಮುಖ್ಯವಾದುದು. ಇದು ಅಂಜೂರ, ಆಲದಮರ ಮತ್ತಿತರ ಜಾತಿಯ ಸಸ್ಯಗಳ ಮೇಲೆ ವಾಸಿಸುತ್ತದೆ. ಇಂಡೋಚೀನ, ಫಾರ್ಮೋಸ, ಸಿಂಹಳ ಮತ್ತು ಫಿಲಿಪೀನ್ ದ್ವೀಪಗಳಲ್ಲಿಯೂ ಇವು ವ್ಯಾಪಿಸಿವೆ. ಕೆಲವು ವೇಳೆ ತಾವು ವಾಸಿಸುವ ಕೊಂಬೆಗಳಲ್ಲಿ ¼ ರಿಂದ ಳಿ ಅಂಗುಲದಷ್ಟು ದಪ್ಪ ಅರಗಿನ ಲೇಪನವಿರುತ್ತದೆ. ಇಂಥ ಕೊಂಬೆಗಳನ್ನು ಕಡಿದು ಅರಗನ್ನು ಬೇರ್ಪಡಿಸಿ ಕರಗಿಸಿ ಆಮೇಲೆ ಶುದ್ಧಿಮಾಡಿ ಅದನ್ನು ಶೆಲ್ಲಾಕ್ ಬಣ್ಣಮಾಡುವುದಕ್ಕೆ ಉಪಯೋಗಿಸುವುದುಂಟು. ಮರುಭೂಮಿಯ ಪಾಪಾಸುಕಳ್ಳಿ ಮತ್ತು ಇತರ ಕೆಲವು ಜಾತಿಯ ಗಿಡಗಳಲ್ಲಿ ಜೀವಿಸುವ ಟಕಾರ್ಡಿಯೆಲ ಜಾತಿಯ ಕೆಲವು ಪ್ರಭೇದಗಳು ಸಹ ಅರಗನ್ನು ಉತ್ಪತ್ತಿಮಾಡುತ್ತವೆ. ಕೆಲವು ಪ್ರಭೇದಗಳು ಬಣ್ಣದ ಅರಗನ್ನೂ ಸ್ರವಿಸುತ್ತವೆ.

 4 ಕೆರ್ಮಿನೀ (ಕೆರ್ಮೆಸಿನೀ, ಹೆಮಿಕಾಕ್ಸಿನೀ): ಈ ಗುಂಪಿಗೆ ಗಂಟು ಅಥವಾ ಮಣಿಗಂಟು (ಗಾಲ್ಸ್) ಅಥವಾ ಮಿಥ್ಯಗಂಟು (ಸ್ಯೂಡೋಗಾಲ್ಸ್) ಕಾಕ್ಸಿಡ್‍ಗಳು ಸೇರಿವೆ. ಹೆಣ್ಣು ಕೀಟಗಳು ದುಂಡಗೆ, ಅರ್ಧಚಂದ್ರಾಕಾರವಾಗಿ ಇಲ್ಲವೆ ಅಂಡಾಕಾರವಾಗಿವೆ. ಪ್ರೌಢಾವಸ್ಥೆಯಲ್ಲಿ ಕಾಲುಗಳಿರುವುದಿಲ್ಲ. ಕುಡಿಮೀಸೆ 8 ಖಂಡಗಳಿಂದ ಕೂಡಿದೆ. ಎಲ್ಮ್ ಹುರುಪೆಕೀಟ (ಎರಿಕೊ ಕಾಕಸ್‍ಸ್ಪೂಯಸ್) ಎಲ್ಮ್ ಮರದ ಸಾಮಾನ್ಯ ಪಿಡುಗು. ಕೆರ್ಮೆನ್ ಎಂಬುದು ಓಕ್‍ಮರದಲ್ಲಿರುತ್ತದೆ. ಟ್ರಬುಟೈನ ಮನ್ನಿಪಾರ ಎಂಬ ತಿಗಣೆ ಟಮಾರಿಕ್ಸ್ ಎಂಬ ಗಿಡಗಳ ಮೇಲಿರುತ್ತವೆ. ಈ ಪ್ರಭೇದದ ತಿಗಣೆ ಸಿಹಿಯಾದ ಮಧುವನ್ನು ಸ್ರವಿಸುತ್ತದೆ. ಶುಷ್ಕ ವಾತಾವರಣಗಳಲ್ಲಿ ಈ ದ್ರವ ಗಟ್ಟಿಯಾಗಿ ಎಲೆಗಳ ಮೇಲೆ ನಿಂತು ದಪ್ಪಪದರವಾಗುತ್ತದೆ. ಇದಕ್ಕೆ ಮನ್ನಾ ಎಂದು ಹೆಸರು.

 5 ಡಾಕ್ಟಿಲೋಪಿನೀ (ಕಾಕ್ಸಿನೀ): ಕೊಚಿನೀಲ್ ಕೀಟಗಳ ಗುಂಪು. ಇವು ಲಕ್ಷಣಗಳಲ್ಲಿ ಮತ್ತು ವರ್ತನೆಗಳಲ್ಲಿ ಮೇಣ ತಿಗಣೆಗಳನ್ನು ಹೋಲುತ್ತವೆ. ಹೆಣ್ಣುತಿಗಣೆಗಳು ಕೆಂಪಗಿವೆ. ಅವುಗಳ ದೇಹದ ಮೇಲೆ ಬಿಳಿಯ ಮೇಣದ ಫಲಕಗಳಿವೆ. ಕಾಲುಗಳು ಮತ್ತು ಕುಡಿಮೀಸೆಗಳು ಮೊಟಕಾಗಿವೆ. ಎಲೆಕಾಕಸ್ ಮತ್ತು ಡ್ಯಾಕ್ಟಿಲೋಪಿಯಸ್ ಎಂಬುವು ಈ ಗುಂಪಿನ ಎರಡು ಜಾತಿಗಳು. ಡ್ಯಾಕ್ಟಿಲೋಪಿಯಸ್ ಕಾಕಸ್ ಕೀಟಗಳು ಪಾಪಾಸುಕಳ್ಳಿಯನ್ನು ತಿನ್ನುತ್ತವೆ. ಮೆಕ್ಸಿಕೋ ದೇಶದಲ್ಲಿ ಇವುಗಳಿಂದ ಕೆಲವು ಬಗೆಯ ಬಣ್ಣಗಳನ್ನು ತಯಾರಿಸುತ್ತಾರೆ. ಪ್ರೌಢಹೆಣ್ಣುಕೀಟಗಳನ್ನು ಕಳ್ಳಿಯಿಂದ ಬಿಡಿಸಿ, ಒಣಗಿಸಿ ಅವುಗಳಿಂದ ಬಣ್ಣವನ್ನು ತೆಗೆಯುವುದು ರೂಢಿ. ಈ ಬಣ್ಣವನ್ನು ಐಸ್‍ಕ್ರೀಂ, ಬೇಕರಿ ಪದಾರ್ಥಗಳ ತಯಾರಿಕೆಯಲ್ಲಿ ಬಳಸುತ್ತಾರೆ. 

 6 ಸ್ಯೂಡೊಕಾಕಿನೀ (ಕಿರಿಯೊಕಾಕ್ಸಿನೀ): ಇವನ್ನು ಮೇಣತಿಗಣೆಗಳೆಂದು (ಮೀಲೀಬಗ್ಸ್) ಕರೆಯುವರು ಇವು ಮೇಣದಂಥ ವಸ್ತುವನ್ನು ಸ್ರವಿಸಿ ತಮ್ಮ ದೇಹಗಳನ್ನು ರಕ್ಷಿಸಿಕೊಳ್ಳುವುದರಿಂದ ಇವಕ್ಕೆ ಈ ಹೆಸರು ಬಂದಿದೆ. ಹೆಣ್ಣು ತಿಗಣೆಯ ದೇಹ ಉದ್ದವಾಗಿ ಖಂಡಗಳಿಂದ ಕೂಡಿದೆ. ಇವಕ್ಕೆ ಬಲವಾದ ಕಾಲುಗಳಿವೆ. ಕೆಲವು ಪ್ರಭೇದಗಳು ಮೊಟ್ಟೆಗಳನ್ನಿಡುತ್ತವೆ ಮತ್ತೆ ಕೆಲವು ನೇರವಾಗಿ ಮರಿಗಳನ್ನು ಹಾಕುತ್ತವೆ. ಮೊಟ್ಟೆಗಳನ್ನು ಮೃದುವಾದ ಮೇಣದಲ್ಲಿಡುತ್ತವೆ. ಸ್ಯೂಡೊಕಾಕಸ್ ಜಾತಿಯ-ಸಿಟ್ರಿ ಮತ್ತು ಫ್ರಜಾಲಿಸ್ ಪ್ರಭೇದಗಳು ನಿಂಬೆ ಜಾತಿಗಿಡಗಳು ಮತ್ತಿತರ ಕೆಲವು ಸಸ್ಯಗಳಿಗೆ ಬಹಳ ಅಪಾಯಕಾರಿಗಳು. ಸ್ಯೂಡೊಕಾಕಸ್ ಲಾಂಗಿಸ್ಟೈನಸ್ ತಿಗಣೆಗಳು ಹಸಿರು ಮಂದಿರದ ಗಿಡಗಳಿಗೆ ಉಪದ್ರವಕಾರಿಗಳು.

 7 ಆಸ್ಟರೊಲೆಕಾನಿನೀ: ಕುಳಿ ಹುರುಪೆ ಕೀಟಗಳು (ಪಿಟ್ ಸ್ಕೇಲ್ ಇನ್ಸೆಕ್ಟ್ಸ್) ಇವು ಅಂಡಾಕೃತಿಯ ಕಾಕ್ಸಿಡುಗಳು. ಹೆಣ್ಣುಕೀಟಗಳ ದೇಹ ಗಟ್ಟಿಯಾದ ಮೇಣದ ಪೊರೆಯಿಂದ ಆವೃತವಾಗಿವೆ. ಇಲ್ಲವೆ ಮೇಣದಲ್ಲಿ ಹುದುಗಿರುತ್ತವೆ. ಕಾಲುಗಳು ಇಲ್ಲದಿರಬಹುದು ಇದ್ದರೂ ಬಲು ಸಣ್ಣವು. ಕಣ್ಣುಗಳಿಲ್ಲ. ಕುಡಿಮೀಸೆಗಳು ಮೊಟಕಾಗಿವೆ. ಇವುಗಳಲ್ಲಿ 4-6 ಖಂಡಗಳಿವೆ. ಸೀರೊಕಾಕಸ್ ಕ್ವರ್ಕಸ್ ಪ್ರಭೇದದ ಕೀಟಗಳು ಮೇಣದಲ್ಲಿ ಪೂರ್ತಿಯಾಗಿ ಹುದುಗಿರುತ್ತವೆ. ಇವುಗಳ ವಾಸ ಓಕ್ ಮರಗಳಲ್ಲಿ ಇವನ್ನು ಚ್ಯುಯಿಂಗ್ ಗಂ ರೀತಿ ಇಂಡಿಯನ್ನರು ಹಿಂದೆ ಉಪಯೋಗಿಸುತ್ತಿದ್ದರು.

 8 ಕಾಕ್ಸಿನೀ (ಲೆಕಾನಿನೀ): ಮೃದು ಹುರುಪೆ ಕೀಟಗಳು (ಸಾಫ್ಟ್ ಸ್ಕೇಲ್ ಇನ್ಸೆಕ್ಟ್ಸ್), ಮೇಣದ ಹುರುಪೆ ಕೀಟಗಳು (ವ್ಯಾಕ್ಸ್ ಸ್ಕೇಲ್ ಇನ್ಸೆಕ್ಟ್ಸ್ಸ್) ಮತ್ತು ಆಮೆ ಹುರುಪೆ ಕೀಟಗಳು (ಟಾರ್ಟಾಯ್ಸ್ ಸ್ಕೇಲ್ ಇನ್ಸೆಕ್ಟ್ಸ್) ಇದಕ್ಕೆ ಸೇರಿವೆ. ಹೆಣ್ಣುಕೀಟಗಳು ಚಪ್ಪಟೆಯಾಗಿ ಉದ್ದವಾಗಿವೆ. ಇವುಗಳ ಹೊರಕವಚ (ಎಕ್ಸೊಸ್ಕೆಲಿಟನ್) ಗಟ್ಟಿಯಾಗಿ ನುಣುಪಾಗಿರುವುದಲ್ಲದೆ ಮೇಣದಿಂದ ಮುಚ್ಚಿರುತ್ತದೆ. ಕುಡಿಮೀಸೆಗಳು ಇಲ್ಲ. ಇದ್ದರೂ ಬಹಳ ಚಿಕ್ಕದಾಗಿವೆ. ಅನೇಕ ಪ್ರಭೇದಗಳ ಹೆಣ್ಣುತಿಗಣೆಗಳು ಆಕಾರದಲ್ಲಿ ಆಮೆಯನ್ನು ಹೋಲುತ್ತವೆ. ಸೈಸೆಟ್ಟಿಯ ಓಲಿಯೆ ತಿಗಣೆಗಳು ಉಷ್ಣವಲಯ ಪ್ರದೇಶಗಳಲ್ಲಿ ಹೇರಳವಾಗಿವೆ. ಇವು ನಿಂಬೆ ಜಾತಿಯ ಗಿಡಗಳನ್ನು ಹಾನಿಗೊಳಿಸುತ್ತವೆ. ಎರಿಸೀರಸ್ ಪೆಲು ಪ್ರಭೇದ ಏಷ್ಯಾದಲ್ಲಿ ಕಾಣಬರುವುದು. ಗಂಡು ಬಿಳಿಯ ಮೇಣವನ್ನು ಹೆಚ್ಚಾಗಿ ಸ್ರವಿಸುತ್ತದೆ. ಇದರಿಂದ ಮೇಣದ ಬತ್ತಿಯನ್ನು ಮಾಡುತ್ತಾರೆ. ಸಿರೊಪ್ಲಾಸ್ಟಸ್ ಸೆರಿಫೆರಸ್ ಭಾರತದಲ್ಲಿ ಕಂಡುಬರುವ ಪ್ರಭೇಧ. ಇದರ ಮೇಣವನ್ನು ಔಷಧಿಗಳ ತಯಾರಿಕೆಯಲ್ಲಿ ಉಪಯೋಗಿಸುವರು.

 9. ಡಿಯಾಸ್ಟಿಡಿನೀ (ಮುಳ್ಳಿನ ಹುರುಪೆ ಕೀಟಗಳು): ಇದು ಕಾಕ್ಸಿಡೀ ಕುಟುಂಬದ ಬಹಳ ಮುಖ್ಯವಾದ ಹಾಗೂ ದೊಡ್ಡ ಉಪಕುಟುಂಬ. ಅನೇಕ ಪ್ರಭೇದಗಳು ಸಸ್ಯಗಳ ಪಿಡುಗುಗಳಾಗಿ ಹೆಸರಾಗಿವೆ. ಹೆಣ್ಣುಕೀಟದ ದೇಹ ಬಹಳ ಸಣ್ಣದಾಗಿಯೂ ಮೃದುವಾಗಿಯೂ ಇದೆ. ಹುರುಪೆಯ ರಕ್ಷಾಕವಚವಿದೆ. ಹುರುಪೆಗಳು ವಿವಿಧ ಪ್ರಭೇದಗಳಲ್ಲಿ ಗುಂಡಗೆ ಅಥವಾ ಅಂಡಾಕಾರವಾಗಿ, ನುಣ್ಣಗೆ ಅಥವಾ ಒರಟಾಗಿ ವಿವಿಧ ಬಣ್ಣವುಳ್ಳದ್ದಾಗಿದೆ. ಗಂಡುಕೀಟದ ಹುರುಪೆ ಹೆಣ್ಣಿನದಕ್ಕಿಂತ ಸಣ್ಣದು ಮತ್ತು ಉದ್ದವಾದುದು. ಪ್ರೌಢಾವಸ್ಥೆಯ ಹೆಣ್ಣುಗಳ ದೇಹ ಸಣ್ಣದಾಗಿ ಚಪ್ಪಟೆಯಾಗಿ ಗುಂಡಗಿದೆ. ದೇಹದ ಖಂಡಗಳು ಅಸ್ಪಷ್ಟವಾಗಿರಬಹುದು. ಅವುಗಳಿಗೆ ಕಣ್ಣುಗಳಾಗಲಿ ಕಾಲುಗಳಾಗಲಿ ಇಲ್ಲ. ಕುಡಿಮೀಸೆಗಳು ಮೋಟಾಗಿ ಇರಬಹುದು ಇಲ್ಲವೆ ಇಲ್ಲದೇ ಇರಬಹುದು. ಗಂಡುಗಳಲ್ಲಿ ರೆಕ್ಕೆಗಳೂ ದೃಢವಾದ ಕಾಲುಗಳೂ ಕುಡಿಮೀಸೆಗಳೂ ಇವೆ.

 ಸಂತಾನಾಭಿವೃದ್ಧಿ ಲಿಂಗರೀತಿಯಲ್ಲಿ ಅಥವಾ ಪಿತೃರಹಿತ ಸಂತಾನ (ಪಾರ್ಥೆನೊ ಜೆನೆಟಿಕ್) ರೀತಿಯಲ್ಲಿ ಆಗಬಹುದು. ಕೆಲವು ಪ್ರಭೇದಗಳು ಮೊಟ್ಟೆಗಳನ್ನಿಡುತ್ತವೆ. ಇನ್ನು ಕೆಲವು ಮರಿಗಳನ್ನು ಹಾಕುತ್ತವೆ. ಪ್ರಥಮ ಪೊರೆಬಿಟ್ಟ ಮರಿ ಅಥವಾ ಹರಿದಾಡುವ ಹುಳುಗಳು (ಕ್ರಾಲರ್ಸ್) ಬಹಳ ಚುರುಕಾಗಿರುತ್ತವೆ. ಇವು ಅನೇಕ ದಿನಗಳವರೆಗೆ ಆಹಾರವಿಲ್ಲದೆ ಜೀವಿಸಬಲ್ಲುವು. ಕಾಕ್ಸಿಡ್ ಕೀಟಗಳು ಅನೇಕ ರೀತಿಯಲ್ಲಿ ಒಂದು ಸ್ಥಳದಿಂದ ಬೇರೆ ಸ್ಥಳಗಳಿಗೆ ಹರಡುತ್ತವೆ. ಹರಿದಾಡುವ ಹುಳುವಿನ ಅವಸ್ಥೆಯಲ್ಲಿ ತಾವೇ ಬೇರೆ ರೀತಿಯಲ್ಲಿ ಬೇರೆ ಸ್ಥಳಗಳಿಗೆ ಹರಡುತ್ತವೆ. ಈ ಹರಿದಾಡುವ ಹುಳುಗಳು ಯಾವುದಾದರೂ ಆಸರೆ ಸಸ್ಯವನ್ನು ತಲುಪಿದ ಮೇಲೆ ತಮ್ಮ ವದನಾಂಗಗಳನ್ನು ಚುಚ್ಚಿ ತಮ್ಮ ಮಿಕ್ಕ ಜೀವಮಾನವನ್ನು ಒಂದೇ ಸ್ಥಳದಲ್ಲಿ ಚಲಿಸದೆ ಕಳೆಯುತ್ತವೆ. ಇವು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಸಸ್ಯಗಳ ಸಾರವನ್ನು ಹೀರಿ ಅವನ್ನು ನಾಶಗೊಳಿಸುತ್ತವೆ.

(ಎನ್.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ